Basava International Center
Kudala Sangama Development Board
ಶರಣ ಸಾಹಿತ್ಯ ಭಂಡಾರ ಮತ್ತು ಸಂಶೋಧನ ಕೇಂದ್ರ
ಕೂಡಲಸಂಗಮ 12ನೇ ಶತಮಾನದಲ್ಲಿ ವೇದ, ಆಗಮ, ಉಪನಿಷತ್ತು ಹಾಗೂ ಧರ್ಮಶಾಸ್ತ್ರಗಳ ಅಧ್ಯಯನ ಕೇಂದ್ರವಾಗಿತ್ತು. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ದೃಷ್ಟಿಯಿಂದ ಶರಣಸಾಹಿತ್ಯ ಭಂಡಾರ ಮತ್ತು ಸಂಶೋಧನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಯುರೋಪಿಯನ್ ಗೋಥಿಕ್ ಶೈಲಿಯ ಗ್ರಂಥಾಲಯ ಕಟ್ಟಡವನ್ನು 88-00 ಲಕ್ಷರೂಪಾಯಿಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕನ್ನಡ ಹಾಗೂ ಆಂಗ್ಲ ಭಾಷೆಯ 7 ಸಾವಿರ, ತತ್ತ್ವಜ್ಞಾನ ಮತ್ತು ವಿವಿಧ ಧಾರ್ಮಿಕ ಗ್ರಂಥಗಳಲ್ಲದೆ, ಶರಣಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳನ್ನು, ವಿಶ್ವಕೋಶಗಳನ್ನು ಸಂಪಾದಿಸಲಾಗಿದೆ. ಶರಣಸಾಹಿತ್ಯಸಕ್ತ ವಿದ್ವಾಂಸರಿಗೆ, ಅಧ್ಯಯನಕಾರರಿಗೆ ಆಕರ ಕೇಂದ್ರವಾಗಿ ಗ್ರಂಥಾಲಯ ರೂಪಗೊಂಡಿದೆ.
ಅಂತಾರಾಷ್ಟ್ರೀಯ ವಚನ ಅಧ್ಯಯನಕೇಂದ್ರ
ದಿನಾಂಕ 20-3-2007 ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ “ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ” ಸ್ಥಾಪನೆಯಾಗಿದೆ. ವಚನಸಾಹಿತ್ಯ ಕುರಿತು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಅಧ್ಯಯನಗಳ ಮಾಹಿತಿಯನ್ನು ಒದಗಿಸುವ “ದತ್ತ ಕಣಜವಾಗಿ” ಕೇಂದ್ರ ರೂಪಗೊಳ್ಳುತ್ತಲಿದೆ. ವಚನಸಾಹಿತ್ಯ, ವಚನಕಾರರು, ಅವರ ಸ್ಥಳ, ಸಾಧನೆ ಕುರಿತು ಆಳವಾದ ಅಧ್ಯಯನ- ಪ್ರಕಟನೆ ಹಾಗೂ ಪ್ರಸಾರವನ್ನು ಮಾಡುವ ಉದ್ದೇಶವನ್ನಿರಿಸಿಕೊಳ್ಳಲಾಗಿದೆ. ಜಾಗತಿಕ ಬೇರೆ ಬೇರೆ ಭಾಷೆಗಳಲ್ಲಿ ವಚನ ಸಾಹಿತ್ಯವನ್ನು ಅನುವಾದ ಮಾಡುವ ದೊಡ್ಡ ಯೋಜನೆಯನ್ನು ಕೇಂದ್ರದಿಂದ ಕೈಗೊಳ್ಳಲಾಗುತ್ತದೆ. ಈಗಾಗಲೇ ವಚನಸಾಹಿತ್ಯ ಕುರಿತು ಪಿಎಚ್.ಡಿ. ಅಧ್ಯಯನಕ್ಕೆ ಅವಕಾಶಮಾಡಿಕೊಡಲಾಗಿದೆ. ಮುಂದಿನ ದಿನಮಾನಗಳಲ್ಲಿ ಎಂ.ಫಿಲ್ ಹಾಗೂ ವಚನ ಡಿಪ್ಲೋಮಾ ಕೋರ್ಸುಗಳನ್ನು ತೆರೆಯಲಾಗುವುದು.
ಬಸವ ಅಂತಾರಾಷ್ಟ್ರೀಯ ಕೇಂದ್ರ
ಅಷ್ಟಕೋನಾಕೃತಿಯ ಆರು ಅಂತಸ್ತಿನ ಬಸವ ಅಂತಾರಾಷ್ಟ್ರೀಯ ಕೇಂದ್ರ ಕಟ್ಟಡವನ್ನು ಅಂದಾಜು 15.00 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕಟ್ಟಡದ ಎತ್ತರ 210 ಅಡಿಗಳಷ್ಟಿದೆ, ಅದರ ಗೋಪುರ 75 ಅಡಿ ಎತ್ತರವುಳ್ಳದ್ದಿರುತ್ತದೆ. ಮೇಲಿನ ಗೋಪುರದಲ್ಲಿ ಧ್ಯಾನ ಮಂದಿರವಿದೆ. ಈ ಕಟ್ಟಡದಲ್ಲಿ ಶ್ರೀ ಬಸವೇಶ್ವರರು ಹಾಗೂ ಸಮಕಾಲಿನ ಶರಣರು ಜಗತ್ತಿಗೆ ಸಾರಿದ ಸರ್ವರಲ್ಲಿ ಸಮಾನತೆ, ಸ್ತ್ರೀಸ್ವಾತಂತ್ರ್ಯ, ಕಾಯಕ ದಾಸೋಹ, ವಚನ ಸಂದೇಶಗಳ ಕುರಿತು ದೃಶ್ಯ ಹಾಗೂ ಶೃವಣ ಮಾಧ್ಯಮಗಳ ಮೂಲಕ ಬಿತ್ತರಿಸುವ ಯೋಜನೆ ಇದೆ. ಕಟ್ಟಡದ ಸುತ್ತಲೂ ಮನೋಹರವಾದ ಉದ್ಯಾನ ಹಾಗೂ ಹಣ್ಣಿನ ತೋಟವಿದೆ. ಸದರಿ ಬಸವ ಮ್ಯುಜಿಯಂನ್ನು ದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ನಿರ್ಮಾಣ ಮಾಡಲು ವಿಸ್ತ್ರತ ಯೋಜನಾ ವರದಿಯನ್ನು ತಯಾರಿಸಲು ದಿ:07-06-2014 ರಂದು ಟೆಂಡರ್ ಕರೆಯಲಾಗಿದೆ.